ಗ್ರಾಮೀಣರ ಅಹವಾಲುಗಳಿಗೆ ತ್ವರಿತ ಪರಿಹಾರ: ಡ್ಯಾಷ್‌ಬೋರ್ಡ್ ಆಧಾರಿತ ಆನ್‌ಲೈನ್ ದೂರು ವ್ಯವಸ್ಥೆಗೆ ಸಚಿವ ಖಂಡ್ರೆ ಸೂಚನೆ
ಪಂಚಾಯಿತಿ ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣ ಜನತೆ ತಮ್ಮ ಅಹವಾಲುಗಳನ್ನು ಸುಲಭವಾಗಿ ದಾಖಲಿಸಿ, ತ್ವರಿತವಾಗಿ ಪರಿಹಾರ ಪಡೆಯಲು ಡ್ಯಾಷ್‌ಬೋರ್ಡ್ ಆಧಾರಿತ ಆನ್‌ಲೈನ್ ದೂರು ದಾಖಲು ಮತ್ತು ಇತ್ಯರ್ಥ ವ್ಯವಸ್ಥೆ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಲಾಗಿದೆ. ಗ್ರಾಮೀಣರು ಎದುರಿಸುವ ವಿವಿಧ ಸಮಸ್ಯೆಗಳ ಕುರಿತು ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ.

ಇ-ಸ್ವತ್ತು, ತೆರಿಗೆ ನಿರ್ಧರಣೆ, ಸಾಮಾಜಿಕ ಅರಣ್ಯೀಕರಣ, ಕೆರೆಗಳ ನಿರ್ವಹಣೆ, ಕೆರೆ ಒತ್ತುವರಿ, ಜಲ ಜೀವನ್ ಮಿಷನ್, ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣ ರಸ್ತೆ, ವಿಬಿಜಿ ರಾಮ್ ಜಿ ಯೋಜನೆ ಹಾಗೂ ಗ್ರಾಮೀಣ ಆಸ್ತಿಗಳ ಸೃಜನೆ ಸೇರಿದಂತೆ ಹಲವು ವಿಷಯಗಳ ಕುರಿತು ದೂರು ದಾಖಲಿಸಲು ಅವಕಾಶ ಇರಲಿದೆ. ಸಾರ್ವಜನಿಕರು ವಿಡಿಯೋ ಮತ್ತು ಫೋಟೋಗಳ ಸಹಿತ ದೂರು ಸಲ್ಲಿಸಲು, ದೂರು ನಿರ್ವಹಿಸುವ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆ ತಿಳಿದುಕೊಳ್ಳಲು ಹಾಗೂ ದೂರು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದಾರೆ.
ನಿಗದಿತ ಕಾಲಮಿತಿಯಲ್ಲಿ ದೂರುಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಸರಳ ಆಪ್ ಮತ್ತು ಡ್ಯಾಷ್‌ಬೋರ್ಡ್ ಸಹಿತ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸುವಂತೆ ಸಚಿವರು ಸೂಚಿಸಿದ್ದಾರೆ.
ಇಲಾಖೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಗ್ರಾಮೀಣರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.
