ದಸರಾ ಪೂರ್ವಸಿದ್ದತೆಗಳ ಪ್ರಗತಿ ಪರಿಶೀಲನಾ ಸಭೆ : ದಕ್ಷಿಣ ಭಾರತದ ಎಲ್ಲ ಮುಖ್ಯಮಂತ್ರಿಗಳಿಗೆ ಆಹ್ವಾನ
ಮೈಸೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ 2026ರ ನಾಡಹಬ್ಬ ಮೈಸೂರು ದಸರಾ ಪೂರ್ವಸಿದ್ಧತೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ದಸರಾಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ದಸರಾ ಸಂದರ್ಭದಲ್ಲಿ ಏರ್ ಶೋ ನಡೆಸುವ ಕುರಿತು ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಲು ನಿರ್ಧರಿಸಲಾಗಿದೆ.

ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ತಂಡಗಳನ್ನು ದಸರಾ ಕವಾಯತು ಮತ್ತು ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ನಿರ್ಧರಿಸಲಾಯಿತು. ವಿವಿಧ ದೇಶಗಳ ರಾಯಭಾರಿಗಳು ಹಾಗೂ ಅಧಿಕಾರಿಗಳನ್ನು ದಸರಾಗೆ ಆಹ್ವಾನಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.
ಚಿತ್ರಸಂತೆ, ವಿಂಟೇಜ್ ಕಾರ್ ರ್ಯಾಲಿ, ರಂಗೋಲಿ ಸ್ಪರ್ಧೆ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಪ್ರತಿದಿನ ಒಬ್ಬ ಸಚಿವರನ್ನು ನಿಯೋಜಿಸುವಂತೆ ನಿರ್ದೇಶನ ನೀಡಲಾಯಿತು.
ದಸರಾ ಜಂಬೂಸವಾರಿಯ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಭಾರತೀಯ ಸೇನೆ, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ, ಇಸ್ರೋ, ಡಿಆರ್ಡಿಒ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಭಾಗವಹಿಸುವಂತೆ ಆಹ್ವಾನಿಸಲಾಗುವುದು.
ಮೈಸೂರಿನ ಅರಮನೆ ಹಾಗೂ ಪ್ರಮುಖ ಪ್ರವಾಸಿ ತಾಣಗಳ ಕುರಿತು ಕಿರುಚಿತ್ರಗಳನ್ನು ನಿರ್ಮಿಸಿ ದಸರಾಗೆ ವ್ಯಾಪಕ ಪ್ರಚಾರ ನೀಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
