ಬ್ಲ್ಯಾಕ್ ಮಾಸ್ ರಫ್ತಿಗೆ ಕೇಂದ್ರದ ನಿಷೇಧ: ನಿರ್ಣಾಯಕ ಖನಿಜಗಳ ದೇಶೀಯ ಮರುಬಳಕೆಗೆ ಉತ್ತೇಜನ
—
ದೇಶೀಯವಾಗಿ ಲಿಥಿಯಂ-ಐಯಾನ್ ಬ್ಯಾಟರಿ ತ್ಯಾಜ್ಯದಿಂದ ದೊರೆಯುವ ನಿರ್ಣಾಯಕ ಖನಿಜಗಳ ಮರುಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬ್ಯಾಟರಿಗಳಿಂದ ಉತ್ಪತ್ತಿಯಾಗುವ ಬ್ಲ್ಯಾಕ್ ಮಾಸ್ ರಫ್ತಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
ಬ್ಯಾಟರಿ ತ್ಯಾಜ್ಯದಿಂದ ದೊರೆಯುವ ಲಿಥಿಯಂ, ಕೋಬಾಲ್ಟ್, ನಿಕಲ್ ಮತ್ತು ಮ್ಯಾಂಗನೀಸ್ ನಂತಹ ನಿರ್ಣಾಯಕ ಖನಿಜಗಳನ್ನು ದೇಶದಲ್ಲೇ ಬಳಕೆ ಮಾಡಲು ಈ ಕ್ರಮ ಸಹಕಾರಿಯಾಗಲಿದೆ. ಇದರಿಂದ ದೇಶೀಯ ಮರುಬಳಕೆ ಘಟಕಗಳಿಗೆ ಕಚ್ಚಾವಸ್ತುಗಳ ಲಭ್ಯತೆ ಹೆಚ್ಚುವುದರ ಜೊತೆಗೆ, ಹೊಸ ಹೂಡಿಕೆ ಮತ್ತು ಉದ್ಯೋಗಾವಕಾಶಗಳಿಗೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ಈ ಕ್ರಮವು ಎಲೆಕ್ಟ್ರಿಕ್ ವಾಹನ, ಬ್ಯಾಟರಿ ಉತ್ಪಾದನೆ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿನ ಆಮದು ಅವಲಂಬನೆ ಕಡಿಮೆ ಮಾಡಿ, ಆತ್ಮನಿರ್ಭರ ಭಾರತ ಮತ್ತು ವರ್ತುಲ ಆರ್ಥಿಕತೆಯ ಅಭಿವೃದ್ಧಿ ಗುರಿಗೆ ಬಲ ನೀಡಲಿದೆ.
ಬ್ಲ್ಯಾಕ್ ಮಾಸ್ (Black Mass) ಎಂದರೆ ಬಳಕೆಯಾದ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಮರುಬಳಕೆ (Recycling) ಮಾಡುವ ಸಂದರ್ಭದಲ್ಲಿ ದೊರೆಯುವ ಕಪ್ಪು ಬಣ್ಣದ ಪುಡಿ ರೂಪದ ಮಿಶ್ರಣ.

ಬ್ಲ್ಯಾಕ್ ಮಾಸ್ ಹೇಗೆ ಉತ್ಪತ್ತಿಯಾಗುತ್ತದೆ?
- ಹಳೆಯ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಸಂಗ್ರಹಿಸಲಾಗುತ್ತದೆ.
- ಬ್ಯಾಟರಿಗಳನ್ನು ಸುರಕ್ಷಿತವಾಗಿ ಡಿಸ್ಚಾರ್ಜ್ ಮಾಡಲಾಗುತ್ತದೆ.
- ಬ್ಯಾಟರಿಗಳನ್ನು ಯಾಂತ್ರಿಕವಾಗಿ ಪುಡಿಮಾಡಲಾಗುತ್ತದೆ (Shredding).
- ಪ್ಲಾಸ್ಟಿಕ್, ಕಬ್ಬಿಣ, ಅಲ್ಯೂಮಿನಿಯಂ ಮತ್ತು ತಾಮ್ರವನ್ನು ಬೇರ್ಪಡಿಸಲಾಗುತ್ತದೆ.
- ಉಳಿಯುವ ಕಪ್ಪು ಪುಡಿಯೇ ಬ್ಲ್ಯಾಕ್ ಮಾಸ್.
2. ಬ್ಲ್ಯಾಕ್ ಮಾಸ್ನ ಉಪಯೋಗಗಳು
- ಲಿಥಿಯಂ ಮರುಪಡೆಯಲು.
- ಕೋಬಾಲ್ಟ್ ಮತ್ತು ನಿಕಲ್ ಮರುಪಡೆಯಲು.
- ಹೊಸ ಲಿಥಿಯಂ-ಐಯಾನ್ ಬ್ಯಾಟರಿಗಳ ತಯಾರಿಕೆಗೆ ಕಚ್ಚಾ ವಸ್ತು ಒದಗಿಸಲು.
- ಬ್ಯಾಟರಿ ತ್ಯಾಜ್ಯದಿಂದ ಮೌಲ್ಯಯುತ ಲೋಹಗಳನ್ನು ಮರುಬಳಕೆ ಮಾಡಲು.
