ಪ್ರತಿ ಕೆಜಿಗೆ 35 ರೂಪಾಯಿಯಂತೆ ಈರುಳ್ಳಿ ; ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ಬಫರ್ ದಾಸ್ತಾನಿನಿಂದ ಲಭ್ಯವಿರುವ ಈರುಳ್ಳಿಯನ್ನು ಹಂತ-ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಮುಂಬರುವ ತಿಂಗಳುಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯಾಗದಂತೆ ತಡೆಯಲು ಹಾಗೂ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಮೇ 15 ರಿಂದ ಖರೀದಿ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ 1.21 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಸಂಗ್ರಹಿಸಲಾಗಿದೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ತಲುಪಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ, ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ, ಸಫಲ್ ಹಾಗೂ ಕೇಂದ್ರ ಭಂಡಾರದ ಚಿಲ್ಲರೆ ಮಳಿಗೆಗಳು ಮತ್ತು ಸಂಚಾರಿ ವ್ಯಾನ್‌ಗಳ ಮೂಲಕ ಪ್ರತಿ ಕೆಜಿಗೆ 35 ರೂಪಾಯಿಯಂತೆ ಈರುಳ್ಳಿ ಮಾರಾಟ ಮಾಡಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಉತ್ತಮ ಉತ್ಪಾದನೆಯ ನಿರೀಕ್ಷೆಯ ಹಿನ್ನೆಲೆಯಲ್ಲಿ, ಬೆಲೆ ಸ್ಥಿರೀಕರಣ ನಿಧಿಯ ಬಫರ್ ದಾಸ್ತಾನಿಗಾಗಿ 2026-27 ರ ಸಾಲಿನಲ್ಲಿ 2 ಲಕ್ಷ ಮೆಟ್ರಿಕ್ ಟನ್ ರಾಬಿ ಈರುಳ್ಳಿ ಖರೀದಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.
ಇದೇ ವೇಳೆ, ಮಹಾರಾಷ್ಟ್ರದ ನಾಸಿಕ್‌ನಿಂದ ಸುಮಾರು 800 ಮೆಟ್ರಿಕ್ ಟನ್ ಈರುಳ್ಳಿಯನ್ನು ಹೊತ್ತ ಮೊದಲ ‘ಕಾಂದಾ ಎಕ್ಸ್‌ಪ್ರೆಸ್’ ರೈಲು ದೆಹಲಿಗೆ ಪ್ರಯಾಣಿಸಿದೆ. ರಸ್ತೆ ಸಾರಿಗೆಯ ಮೂಲಕವೂ ದೇಶದ ಪ್ರಮುಖ ಬಳಕೆ ಕೇಂದ್ರಗಳಿಗೆ ಈರುಳ್ಳಿ ಪೂರೈಕೆಯನ್ನು ಚುರುಕುಗೊಳಿಸಲಾಗಿದೆ.
