ರಾಜ್ಯ

ನಗದು ರಹಿತ ವಹಿವಾಟಿಗೆ ಉತ್ತೇಜನ : NCME ಪರಿಚಯಿಸಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿದೆ. ಈಗಾಗಲೇ ನಗದು ರಹಿತ ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿ ಯಶಸ್ವಿಯಾಗಿರುವ ಸಂಸ್ಥೆ, ಇದೀಗ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ (NCMC) ವ್ಯವಸ್ಥೆಯನ್ನು ಪರಿಚಯಿಸಿದೆ.

ನಾಲ್ಕು ಸಾರಿಗೆ ಸಂಸ್ಥೆಗಳ ಪೈಕಿ ಮೊದಲ ಬಾರಿಗೆ NCMC ವ್ಯವಸ್ಥೆಯನ್ನು ಜಾರಿಗೆ ತಂದ ಸಂಸ್ಥೆ ಎಂಬ ಹೆಗ್ಗಳಿಕೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪಾತ್ರವಾಗಿದೆ. ನಗದು ರಹಿತ ಹಾಗೂ ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಗಸ್ಟ್ ತಿಂಗಳಿನಿಂದಲೇ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಇದೀಗ ಪ್ರಯಾಣಿಕರ ಬಳಕೆಗೆ ಲಭ್ಯವಾಗಿದೆ.

ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿ ಸ್ಮಾರ್ಟ್ ಆ್ಯಂಡ್ರಾಯ್ಡ್ ಆಧಾರಿತ ಇಟಿಎಂ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಇದೇ ಯಂತ್ರಗಳ ಮೂಲಕ NCMC ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಯುಪಿಐ ಮೂಲಕ ಮೊಬೈಲ್‌ನಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್‌ಗಾಗಿ ಹಣ ಪಾವತಿಸಲಾಗುತ್ತಿದೆ. ಆದರೆ, NCMC ವ್ಯವಸ್ಥೆಯಲ್ಲಿ ಕಾರ್ಡ್ ಅನ್ನು ಇಟಿಎಂ ಯಂತ್ರಕ್ಕೆ ಟ್ಯಾಪ್ ಮಾಡುವ ಮೂಲಕವೇ ಟಿಕೆಟ್ ಮೊತ್ತ ಪಾವತಿಸಬಹುದಾಗಿದೆ.

ಇದರಿಂದ ಚಿಲ್ಲರೆ ಹಣದ ಸಮಸ್ಯೆ ಹಾಗೂ ನಗದು ವಹಿವಾಟಿನ ತೊಂದರೆ ತಪ್ಪಲಿದೆ. ಮತ್ತೊಂದು ವಿಶೇಷವೆಂದರೆ, NCMC ಕಾರ್ಡ್‌ಗಳು ಆಫ್‌ಲೈನ್ ವ್ಯಾಲೆಟ್ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ನೆಟ್‌ವರ್ಕ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿಯೂ ಟಿಕೆಟ್ ಮೊತ್ತ ಪಾವತಿಸಲು ಸಾಧ್ಯವಾಗಲಿದೆ.

ಬೆಂಗಳೂರು ಮೆಟ್ರೋ, ದೆಹಲಿ ಮೆಟ್ರೋ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ದೇಶದ ಹಲವು ಸಾರಿಗೆ ವ್ಯವಸ್ಥೆಗಳಲ್ಲಿ ಈಗಾಗಲೇ NCMC ಕಾರ್ಡ್ ಬಳಕೆಯಲ್ಲಿದೆ. ಈ ಕಾರ್ಡ್‌ಗಳನ್ನು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿಯೂ ಬಳಸಬಹುದಾಗಿದೆ.

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಕಾರ್ಡ್’ ಯೋಜನೆಯಡಿ ರೂಪಿಸಲಾದ ಏಕೀಕೃತ ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್. ಮೆಟ್ರೋ, ಬಸ್, ಟೋಲ್ ಸೇರಿದಂತೆ ವಿವಿಧ ಸಾರಿಗೆ ಸೇವೆಗಳು ಹಾಗೂ ಕೆಲವು ದೈನಂದಿನ ಖರೀದಿಗಳಿಗೂ ಇದನ್ನು ಬಳಸಬಹುದಾಗಿದೆ.

ಯುಪಿಐ ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ NCMC ವ್ಯವಸ್ಥೆಯ ಬಳಕೆ ಕೆಲಮಟ್ಟಿಗೆ ಕಡಿಮೆಯಾಗಿದ್ದರೂ, ಸಾರಿಗೆ ಕ್ಷೇತ್ರದಲ್ಲಿ ಇದರ ಬಳಕೆಗೆ ಇದೀಗ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬೆಂಗಳೂರಿನ ಮೆಟ್ರೋದಲ್ಲಿ NCMC ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಭಾಗದ ಪ್ರಯಾಣಿಕರಿಗೂ ಇದೇ ರೀತಿಯ ಸೌಲಭ್ಯ ಒದಗಿಸುವ ಉದ್ದೇಶದಿಂದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಮುಖ್ಯವಾಗಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿನ NCMC ಸೌಲಭ್ಯ ಹೊಂದಿರುವ ಸಾರಿಗೆ ವ್ಯವಸ್ಥೆಗಳಲ್ಲಿಯೂ ಈ ಕಾರ್ಡ್ ಬಳಸಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ನಗದು ರಹಿತ, ವೇಗದ ಮತ್ತು ಸುಲಭ ಪ್ರಯಾಣದ ಅನುಭವ ದೊರೆಯಲಿದೆ.

Leave a Reply

Your email address will not be published. Required fields are marked *