EOS-05 ಭೂ ವಿಶ್ಲೇಷಣಾ ಉಪಗ್ರಹ ಉಡಾವಣೆಗೆ ಸಿದ್ಧತೆ: ಸೆಪ್ಟೆಂಬರ್ 4ರಂದು GSLV-F17 ಮೂಲಕ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ 2026ರ ಸೆಪ್ಟೆಂಬರ್ 4ರಂದು ಬೆಳಗಿನ 2:55ಕ್ಕೆ ಉಡಾವಣೆ ಮಾಡಲು ನಿಗದಿಪಡಿಸಲಾಗಿದ್ದು, EOS-05 ಭೂ ವಿಶ್ಲೇಷಣಾ ಉಪಗ್ರಹವನ್ನು ಉಡಾವಣೆ ಮಾಡಲಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV-F17 ರಾಕೆಟ್ ಮೂಲಕ ಈ ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಇದು GSLV ಸರಣಿಯ 19ನೇ ಉಡಾವಣೆಯಾಗಿದೆ. EOS-05 ಅತ್ಯಾಧುನಿಕ ಭೂ ವಿಶ್ಲೇಷಣಾ ಉಪಗ್ರಹವಾಗಿದ್ದು, ಇದು ಭಾರತದ ಮೊದಲ ಇಮೇಜಿಂಗ್ ಉಪಗ್ರಹವಾಗಿದೆ. ಇದನ್ನು ಭೂ ಸಮಕಾಲಿಕ ಕಕ್ಷೆಗೆ ಸೇರ್ಪಡೆ ಮಾಡಲಾಗುವುದು. ಇದರಿಂದ ಭಾರತದ ಭೂ ಅನ್ವೇಷಣಾ ಸಾಮರ್ಥ್ಯ ಬಲವರ್ಧನೆಗೊಳ್ಳಲಿದೆ. ಉಡಾವಣೆಗೆ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಅವರು ಹೇಳಿದ್ದಾರೆ.
ಇದರ ಪ್ರಮುಖ ಅಂಶಗಳು ಈ ರೀತಿ ಒಳಗೊಂಡಿದೆ.
- ಭೂಸ್ಥಿರ ಕಕ್ಷೆಯಿಂದ ವೀಕ್ಷಣೆ: ಭೂಮಿಯ ಒಂದು ದೊಡ್ಡ ಪ್ರದೇಶವನ್ನು ನಿರಂತರವಾಗಿ ಗಮನಿಸಲು ಅನುಕೂಲವಾಗುವ ಜಿಯೋ-ಇಮೇಜಿಂಗ್ ಉಪಗ್ರಹವಾಗಿದೆ.
- ತ್ವರಿತ ಚಿತ್ರಣ: ನಿರ್ದಿಷ್ಟ ಪ್ರದೇಶಗಳ ಚಿತ್ರಗಳನ್ನು ಆಗಾಗ್ಗೆ ಪಡೆಯುವ ಮೂಲಕ ಬದಲಾವಣೆಗಳನ್ನು ಬಹುತೇಕ ನೈಜ ಸಮಯದಲ್ಲಿ ಗಮನಿಸಲು ನೆರವಾಗಲಿದೆ.
- ನೈಸರ್ಗಿಕ ಸಂಪನ್ಮೂಲಗಳ ಮೇಲ್ವಿಚಾರಣೆ: ಭೂ ಬಳಕೆ, ನೈಸರ್ಗಿಕ ಸಂಪನ್ಮೂಲಗಳು ಸೇರಿದಂತೆ ವಿವಿಧ ಭೂ ಮೇಲ್ಮೈ ಬದಲಾವಣೆಗಳ ಅಧ್ಯಯನಕ್ಕೆ
- ವಿಪತ್ತು ನಿರ್ವಹಣೆ: ಪ್ರವಾಹ, ಚಂಡಮಾರುತ, ಭೂಕುಸಿತ, ಕಾಡ್ಗಿಚ್ಚು ಸೇರಿದಂತೆ ನೈಸರ್ಗಿಕ ವಿಪತ್ತುಗಳ ಸಂದರ್ಭಗಳಲ್ಲಿ ತ್ವರಿತ ಚಿತ್ರಣ ಒದಗಿಸಲು ಸಹಕಾರಿಯಾಗಲಿದೆ.
- ಅತ್ಯಾಧುನಿಕ ತಂತ್ರಜ್ಞಾನ: ವೇಗದ ಡೇಟಾ ನಿರ್ವಹಣೆ ಮತ್ತು ಪ್ರಸರಣ, ಸುಧಾರಿತ ಆನ್‌ಬೋರ್ಡ್ ಕಂಪ್ಯೂಟರ್, ಹೊಸ ಪವರ್ ಎಲೆಕ್ಟ್ರಾನಿಕ್ಸ್ ಹಾಗೂ ಹೆಚ್ಚು ಚುರುಕಾಗಿ ಕಾರ್ಯನಿರ್ವಹಿಸುವ ಪ್ಲಾಟ್‌ಫಾರ್ಮ್‌ನಂತಹ ತಂತ್ರಜ್ಞಾನಗಳನ್ನು ಬಳಸಲಾಗಿದೆ.
- GSLV-F17 ಉಡಾವಣೆ: EOS-05 ಅನ್ನು GSLV-F17 ರಾಕೆಟ್ ಮೂಲಕ ಉಪ-ಭೂಸ್ಥಿರ ವರ್ಗಾವಣೆ ಕಕ್ಷೆಗೆ ಸೇರಿಸುವ ಉದ್ದೇಶವಿದೆ.
