ರಾಷ್ಟ್ರ

ರಾಷ್ಟ್ರೀಯ ಬಾಹ್ಯಾಕಾಶ ದಿನ: 20ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಸಂವಾದ

ರಾಷ್ಟ್ರೀಯ ಬಾಹ್ಯಾಕಾಶ ದಿನ ಹಿನ್ನೆಲೆ : ಪ್ರಧಾನಿ ನರೇಂದ್ರ ಮೋದಿ ಅವರು 20ಕ್ಕೂ ಹೆಚ್ಚು ಭಾರತೀಯ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಭಾಗವಹಿಸಿದ ಪ್ರಮುಖ ಸ್ಟಾರ್ಟ್‌ಅಪ್‌ಗಳು: ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್, ಪಿಕ್ಸೆಲ್, ಧ್ರುವ ಸ್ಪೇಸ್, ಗ್ಯಾಲಕ್ಸಿಐ, ಪಿಯರ್‌ಸೈಟ್, ಬೆಲ್ಲಾಟ್ರಿಕ್ಸ್ ಏರೋಸ್ಪೇಸ್, ದಿಗಂತರಾ, ಸ್ಯಾಟ್‌ಶೂರ್, ಸುಹೋರಾ ಟೆಕ್ನಾಲಜೀಸ್, ಮಾನಸ್ತು ಸ್ಪೇಸ್, ಆಸ್ಟ್ರೋಬೇಸ್, ಟೇಕ್‌ಮೀ2ಸ್ಪೇಸ್, ವ್ಯೋಮಿಕ್, ಕಾಸ್ಮೋಸರ್ವ್ ಸ್ಪೇಸ್, ಆರ್ಬಿಟ್‌ಎಐಡಿ ಏರೋಸ್ಪೇಸ್, ಸ್ಕೈಸರ್ವ್, ಸೆರೆಂಡಿಪಿಟಿ ಸ್ಪೇಸ್, ವಸ್ಸಾರ್ ಲ್ಯಾಬ್ಸ್ ಮತ್ತು ಮಿಸ್ಟ್‌ಇಒ ಸೇರಿದಂತೆ ಸಂಸ್ಥೆಗಳು ಭಾಗವಹಿಸಿದ್ದವು

ದೇಶದ ಬಾಹ್ಯಾಕಾಶ ಕ್ಷೇತ್ರವು ಇದೀಗ ವಿಶ್ವಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಪ್ರತಿಭೆ, ಬಂಡವಾಳ ಹೂಡಿಕೆ, ತಂತ್ರಜ್ಞಾನಗಳ ಸಮರ್ಪಕ ಸದ್ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರವನ್ನು ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಅನುಕೂಲವಾಗುವಂತೆ ಹಾಗೂ ಅವರ ದೈನಂದಿನ ಬದುಕಿಗೆ ಸಹಕಾರಿಯಾಗುವ ರೀತಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಹೇಳಿದ್ದಾರೆ.

2047ರ ವೇಳೆಗೆ ಭಾರತ, ಅಭಿವೃದ್ಧಿ ಹೊಂದಿದ ದೇಶವಾಗಲು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಅಭಿವೃದ್ಧಿಯೂ ಸಹ ಅತ್ಯಂತ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿ ವಲಯವು ಸಹ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಖಾಸಗಿ ವಲಯದಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿವೆ ಎಂದರು.

ವಿವಿಧ ತಂತ್ರಜ್ಞಾನ ಕ್ಷೇತ್ರಗಳು: ಈ ಸ್ಟಾರ್ಟ್‌ಅಪ್‌ಗಳು ರಾಕೆಟ್‌ಗಳು, ಮರುಬಳಕೆ ಮಾಡಬಹುದಾದ ಸೆಮಿ-ಕ್ರಯೋಜೆನಿಕ್ ಉಡಾವಣಾ ವಾಹನಗಳು, ಏವಿಯಾನಿಕ್ಸ್, ಉಪಗ್ರಹಗಳು, ಸುಧಾರಿತ ಪ್ರೊಪಲ್ಷನ್ ವ್ಯವಸ್ಥೆಗಳು, ಬಾಹ್ಯಾಕಾಶ ಮತ್ತು ರಕ್ಷಣಾ ಗುಪ್ತಚರ, ಬಾಹ್ಯಾಕಾಶ ತ್ಯಾಜ್ಯ ನಿವಾರಣೆ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಸ್ಥಳೀಯ ಹವಾಮಾನ ಮತ್ತು ಹವಾಮಾನ ಬದಲಾವಣೆ ಮಾಹಿತಿ ವಿಶ್ಲೇಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೃಷಿಗೆ ಬಾಹ್ಯಾಕಾಶ ತಂತ್ರಜ್ಞಾನ: ಕೃಷಿ ಮಾತ್ರವಲ್ಲದೆ ಜಾನುವಾರು ನಿರ್ವಹಣೆ, ಹೈನುಗಾರಿಕೆ ಮತ್ತು ಪರಿಸರ ಕ್ಷೇತ್ರಗಳಲ್ಲೂ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವಂತೆ ಪ್ರಧಾನಿ ಸ್ಟಾರ್ಟ್‌ಅಪ್‌ಗಳಿಗೆ ಸಲಹೆ ನೀಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಗಳು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ಸಹಯೋಗಿಸುವಂತೆ ಅವರು ಕರೆ ನೀಡಿದ್ದಾರೆ.

ಶಾಲಾ ಮಕ್ಕಳಿಗೆ ಬಾಹ್ಯಾಕಾಶದ ಬಗ್ಗೆ ಆಸಕ್ತಿ: ಅಟಲ್ ಟಿಂಕರಿಂಗ್ ಲ್ಯಾಬ್‌ಗಳೊಂದಿಗೆ ಬಾಹ್ಯಾಕಾಶ ಉದ್ಯಮವು ಹೆಚ್ಚು ಸಹಕರಿಸುವ ಮೂಲಕ ಚಿಕ್ಕ ವಯಸ್ಸಿನಿಂದಲೇ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಕುತೂಹಲ ಮತ್ತು ಆಸಕ್ತಿ ಬೆಳೆಸಬಹುದು ಎಂದು ಪ್ರಧಾನಿ ಹೇಳಿದ್ದಾರೆ.

Leave a Reply

Your email address will not be published. Required fields are marked *