ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕಾಪು ದಾಸ್ತಾನು: ಕೈಗೆಟಕುವ ದರದಲ್ಲಿ ದೊರೆಯುವಂತೆ ಮಾಡಲು ಸರ್ಕಾರದ ಕ್ರಮ
ದೇಶದಲ್ಲಿ ಈರುಳ್ಳಿ ಬೆಲೆಯ ಒತ್ತಡವನ್ನು ನಿವಾರಿಸಲು ಕೇಂದ್ರ ಸರ್ಕಾರ ಕಾಪು ದಾಸ್ತಾನು ಬಿಡುಗಡೆ ಮಾಡಲು ಮುಂದಾಗಿದೆ.
ಈ ಉಪಕ್ರಮದ ಭಾಗವಾಗಿ ಮಹಾರಾಷ್ಟ್ರದ ನಾಸಿಕ್ ನಿಂದ ಕಾಂದಾ ಎಕ್ಸ್ ಪ್ರೆಸ್ ಮೂಲಕ ಈರುಳ್ಳಿ ರವಾನಿಸಲಾಗುತ್ತಿದೆ. 450 ಮೆಟ್ರಿಕ್ ಟನ್ ಈರುಳ್ಳಿಯನ್ನು ಹೊತ್ತ ರೈಲು ದೆಹಲಿ ತಲುಪಿದ್ದು, ನಂತರ ವಾರಾಣಸಿ, ಲಕ್ನೋ, ಚಂಡೀಗಢ, ಅಮೃತಸರ ಮತ್ತು ಇತರೆಡೆ ಈರುಳ್ಳಿ ವಿತರಿಸಲಾಗುವುದು. 840 ಮೆಟ್ರಿಕ್ ಟನ್ ಈರುಳ್ಳಿ ಹೊತ್ತ ರೈಲು ನಿನ್ನೆ ಚೆನ್ನೈ ತಲುಪಿದ್ದು, ಚೆನ್ನೈನ ವಿವಿಧ ಜಿಲ್ಲೆಗಳಿಗೆ ವಿತರಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.
ಈ ನಡುವೆ ಒಂದು ಸಾವಿರ ಮೆಟ್ರಿಕ್ ಟನ್ ಈರುಳ್ಳಿಯನ್ನು ರಸ್ತೆ ಮೂಲಕ ಸಾಗಿಸಲಾಗುತ್ತಿದೆ. ಸುಮಾರು ಮೂರು ಸಾವಿರದ 400 ರೈತರಿಗೆ 210 ಕೋಟಿ ರೂಪಾಯಿ ನೇರವಾಗಿ ಪಾವತಿಸಲಾಗಿದ್ದು, ಗ್ರಾಹಕರಿಗೆ ಈರುಳ್ಳಿ ಲಭ್ಯತೆ ಖಚಿತಪಡಿಸಿಕೊಳ್ಳಲು ಹಾಗೂ ಕೈಗೆಟಕುವ ದರದಲ್ಲಿ ದೊರೆಯುವಂತೆ ಮಾಡಲು ಸರ್ಕಾರ ಬದ್ಧವಾಗಿದೆ. ಕಾಪು ದಾಸ್ತಾನು ಈರುಳ್ಳಿ ಬಿಡುಗಡೆಯಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಸುಧಾರಿಸಿದೆ. ಬೆಲೆ ಸ್ಥಿರತೆ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
