ನೇಪಾಳದಲ್ಲಿ ಭೀಕರ ಮೇಘಸ್ಫೋಟ: 750ಕ್ಕೂ ಅಧಿಕ ಮಂದಿ ನಾಪತ್ತೆ.
ನೇಪಾಳದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದ ಪ್ರವಾಹಕ್ಕೆ ಹಲವು ಮಂದಿ ಮೃತಪಟ್ಟಿದ್ದು, 750ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯ ಪ್ರಜೆಗಳು ಸೇರಿದ್ದಾರೆ.
ಟಿಬೆಟ್‌ನಲ್ಲಿ ಹುಟ್ಟಿಕೊಂಡ ಪ್ರವಾಹವು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳಿಗೆ ಭಾರಿ ಹಾನಿ ಉಂಟುಮಾಡಿದೆ. ಹಲವು ಪ್ರಮುಖ ಸೇತುವೆಗಳು ಕೊಚ್ಚಿಹೋಗಿದ್ದು, ಸುಮಾರು ಒಂದು ಡಜನ್ ಜಲವಿದ್ಯುತ್ ಯೋಜನೆಗಳ ಕಾರ್ಯಾಚರಣೆಯೂ ಸ್ಥಗಿತಗೊಂಡಿದೆ.
ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸಂಸತ್ತಿನಲ್ಲಿ ಈ ಕುರಿತು ಮಾಹಿತಿ ತಿಳಿಸಿದ್ದು, ಟಿಬೆಟ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಮೂರು ನಿಮಿಷಗಳ ಬಳಿಕ ಹಠಾತ್ ಪ್ರವಾಹ ವರದಿಯಾಗಿದೆ ಎಂದು ತಿಳಿಸಿದ್ದಾರೆ. ಭೂಕಂಪನದ ಕಂಪನದಿಂದ ಹಿಮನದಿ ಸರೋವರ ಒಡೆದು ನೀರು ಹೊರಬಂದಿರುವ ಸಾಧ್ಯತೆಯೇ ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ.
ರಾಸುವಾ ಜಿಲ್ಲೆಯ ಗಡಿ ಪಟ್ಟಣವಾದ ಟಿಮುರೆಯಲ್ಲಿ ಬೋಟೆ ಕೋಶಿ ನದಿಯ ಮೂಲಕ ಭಾರೀ ಪ್ರವಾಹವು ತ್ರಿಶೂಲಿ ನದಿಯನ್ನು ಪ್ರವೇಶಿಸಿದೆ. ನೇಪಾಳ-ಟಿಬೆಟ್ ಗಡಿಯಲ್ಲಿರುವ ಲ್ಹೆಂಡೆ ನದಿಯಲ್ಲಿ ಬಂಡೆ ಕುಸಿತ ಮತ್ತು ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಈ ಪ್ರವಾಹ ಉಂಟಾಗಿದೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಪ್ರವಾಹವು ನದಿಯ ಹರಿವಿನ ಮಾರ್ಗದಲ್ಲಿ ನುವಾಕೋಟ್, ಚಿತ್ವಾನ್, ಗೋರಖಾ, ತನಾಹು ಮತ್ತು ನವಲ್ಪರಾಸಿ ಈಸ್ಟ್ ಸೇರಿದಂತೆ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ರಾಜಧಾನಿ ಕಠ್ಮಂಡುವಿನಿಂದ ಸುಮಾರು 200 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಗಳಿಗೂ ಪ್ರವಾಹದ ಪರಿಣಾಮ ಬೀರಿದೆ.
ನೇಪಾಳದ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಭಾರತೀಯ ಪ್ರಜೆಗಳಿಗೆ ನೆರವು ಹಾಗೂ ಮಾಹಿತಿಗಾಗಿ ತುರ್ತು ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. + 977 985 131 6807 ಮತ್ತು + 977 970 910 7500 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ಇದೇ ವೇಳೆ, ನೇಪಾಳ ಪ್ರವಾಸೋದ್ಯಮ ಮಂಡಳಿಯೂ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಟೋಲ್ ಫ್ರೀ ತುರ್ತು ಸಂಖ್ಯೆ 1234, ಹಾಟ್‌ಲೈನ್ 1144 ಹಾಗೂ ಪ್ರವಾಸಿ ಪೊಲೀಸ್ ಸಂಖ್ಯೆ 9851289445 ಮೂಲಕ ನೆರವು ಪಡೆಯಬಹುದಾಗಿದೆ.
ಭಾರತೀಯರಿಗೆ ತುರ್ತು ಸಂಪರ್ಕ
ನೇಪಾಳದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ಮತ್ತು ಮಾಹಿತಿಗಾಗಿ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಸಂಖ್ಯೆಗಳ ಮೂಲಕ ಸಂಪರ್ಕಿಸಲು ಸೂಚಿಸಿದೆ:
+977 985 131 6807
+977 970 910 7500
ನೇಪಾಳ ಪ್ರವಾಸೋದ್ಯಮ ಮಂಡಳಿಯ ಸಹಾಯವಾಣಿ:
ಟೋಲ್ ಫ್ರೀ ತುರ್ತು ಸಂಖ್ಯೆ: 1234
ಹಾಟ್‌ಲೈನ್: 1144
ಪ್ರವಾಸಿ ಪೊಲೀಸ್: 9851289445
