ಪ್ರಧಾನಿ ಅವರ ಮನ್ ಕೀ ಬಾತ್ ಸಂಚಿಕೆ : ಬೆಂಗಳೂರಿನ ನಿಂಗಮ್ಮ ಸ್ವಾವಲಂಭಿ ಜೀವನ ಕುರಿತು ಪ್ರಸ್ತಾಪ
ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನ 137ನೇ ಸಂಚಿಕೆಯಲ್ಲಿ ಬೆಂಗಳೂರಿನ ಬೀದಿಬದಿ ವ್ಯಾಪಾರಿ ನಿಂಗಮ್ಮ ಅವರ ಸ್ವಾವಲಂಭಿ ಜೀವನದ ಕುರಿತು ತಮ್ಮ ಮನದ ಮಾತಿನಲ್ಲಿ ಹಂಚಿಕೊಂಡಿದ್ದು, ಪಿಎಂ –ಸ್ವನಿಧಿ ಯೋಜನೆಯು ಅವರ ಜೀವನ ಸುಧಾರಣೆಗೆ ಉತ್ತಮ ಮಾರ್ಗವಾಗಿದೆ ಎಂಬುದನ್ನು ಪ್ರಧಾನಿ ಪ್ರಸ್ತಾಪಿಸಿದ್ದಾರೆ.
ಸ್ವ-ನಿಧಿ ಯೋಜನೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ನೀಡಿ ಮಧ್ಯವರ್ತಿಗಳ ಶೋಷಣೆಯಿಲ್ಲದೆ, ನೆಮ್ಮದಿಯಿಂದ ಜೀವನ ಈ ಯೋಜನೆ ಸಹಕಾರಿಯಾಗಿದೆ. ಇವರು ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದು, ಪಿಎಂ ಸ್ವನಿಧಿ ಯೋಜನೆಯಿಂದ 10 ಸಾವಿರ ರೂಪಾಯಿ ಬಳಿಕ ಈಗ 50 ಸಾವಿರ ರೂಪಾಯಿಗಳ ಸಾಲ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ.ಇದರಿಂದ ಅವರ ನಡೆಸುವ ಮೊಬೈಲ್ ಕ್ಯಾಂಟೀನ್ ವ್ಯವಹಾರವು ಅಭಿವೃದ್ಧಿಯಾಗಿದ್ದು, ಗ್ರಾಹಕರು ಹೆಚ್ಚಾಗಿ, ಸಂಪಾದನೆಯ ಹೆಚ್ಚಳವಾಗಿದೆ. ಇದರೊಂದಿಗೆ ಇವರು ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ತಮ್ಮ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಸಹ ಕೊಡಿಸುತ್ತಿದ್ದಾರೆ . ದೇಶದ ಮಹಿಳಾ ಸಬಲೀಕರಣಕ್ಕೆ ಇದು ಜೀವಂತ ಉದಾಹರಣೆಯಾಗಿದೆ ಎಂದು ಪ್ರಧಾನಿ ತಮ್ಮ ಮನದ ಮಾಹಿನಲ್ಲಿ ಹೇಳಿದ್ದಾರೆ.
PM SVANidhi (Prime Minister Street Vendor’s AtmaNirbhar Nidhi) ಯೋಜನೆಯನ್ನು ಕೇಂದ್ರ ಸರ್ಕಾರವು ಬೀದಿಬದಿ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ದೊರಕುವಂತೆ ಮಾಡಲು ಆರಂಭಿಸಿತು. ಕೋವಿಡ್-19 ಸಾಂಕ್ರಾಮಿಕದಿಂದ ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಉಂಟಾದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು 2020ರಲ್ಲಿ ಆರಂಭಿಸಲಾಯಿತು.
ಯೋಜನೆಯ ಪ್ರಮುಖ ಉದ್ದೇಶಗಳು:
- ಬೀದಿಬದಿ ವ್ಯಾಪಾರಿಗಳಿಗೆ ಕಾರ್ಯನಿರ್ವಹಣಾ ಬಂಡವಾಳದ ಸಾಲ ಒದಗಿಸುವುದು.
- ವ್ಯಾಪಾರವನ್ನು ಪುನರಾರಂಭಿಸಲು ಅಥವಾ ವಿಸ್ತರಿಸಲು ಆರ್ಥಿಕ ನೆರವು ನೀಡುವುದು.
- ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವವರಿಗೆ ಮುಂದಿನ ಹಂತಗಳಲ್ಲಿ ಹೆಚ್ಚಿನ ಸಾಲದ ಅವಕಾಶ ಕಲ್ಪಿಸುವುದು.
- ಡಿಜಿಟಲ್ ವಹಿವಾಟನ್ನು ಉತ್ತೇಜಿಸುವುದು.
- ಬೀದಿಬದಿ ವ್ಯಾಪಾರಿಗಳನ್ನು ಅಧಿಕೃತ ಹಣಕಾಸು ವ್ಯವಸ್ಥೆಯೊಂದಿಗೆ ಸಂಪರ್ಕಿಸುವುದು.
- ಮಹಿಳಾ ವ್ಯಾಪಾರಿಗಳು ಸೇರಿದಂತೆ ಸಣ್ಣ ಉದ್ಯಮಿಗಳಿಗೆ ಆತ್ಮನಿರ್ಭರತೆ ಸಾಧಿಸಲು ನೆರವಾಗುವುದು.
ಇತ್ತೀಚಿನ ವರ್ಷಗಳಲ್ಲಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಸಾಲದ ಹಂತಗಳು ಮತ್ತು ಡಿಜಿಟಲ್ ವಹಿವಾಟು ಸೇರಿದಂತೆ ಹಲವು ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
